ಜಲಕೃಷಿ -
ಸಸ್ಯಗಳನ್ನು-ಮುಖ್ಯವಾಗಿ ತರಕಾರಿ, ಹಣ್ಣು ಹಂಪಲು ಮುಂತಾದ ಬೆಳೆಗಳನ್ನು-ಮಣ್ಣಿನ ಅವಶ್ಯಕತೆ ಇಲ್ಲದೆಯೇ ಕಾಂಕ್ರೀಟ್ ಇಲ್ಲವೆ ಇತರ ಬಗೆಯ ತೊಟ್ಟಿಗಳಲ್ಲಿ ತುಂಬಿರುವ ಇನಾಗ್ರ್ಯಾನಿಕ್ ಲವಣ ದ್ರಾವಣಗಳಲ್ಲಿ ಬೆಳೆಸುವ ವಿಧಾನ (ಹೈಡ್ರಪಾನಿಕ್ಸ್). ಸಸ್ಯಗಳ ಬೆಳವಣಿಗೆ ಮತ್ತು ಪರಿವರ್ಧನೆಗೆ ಅಗತ್ಯವಾದ ಖನಿಜ ಪೋಷಕಾಂಶಗಳ ಅಧ್ಯಯನಕ್ಕಾಗಿ 19ನೆಯ ಶತಮಾನದ ಮಧ್ಯಭಾಗದಲ್ಲಿ ಈ ಪ್ರಯೋಗತಂತ್ರವನ್ನು ಬಳಸಲಾಯಿತು. ಹಲವಾರು ವರ್ಷಗಳ ಕಾಲ ಇದು ಪ್ರಯೋಗಾಲಯ ವಿಧಾನವಾಗಿ ಮಾತ್ರ ರೂಢಿಯಲ್ಲಿತ್ತು. ಅನಂತರ ಇದರ ಉಪಯುಕ್ತತೆಯ ಅರಿವಾದ ಮೇಲೆ ದೊಡ್ಡ ಮೊತ್ತದಲ್ಲಿ ಸಸ್ಯಗಳನ್ನು ಬೆಳೆಸುವುದಕ್ಕೂ ಈ ವಿಧಾನವನ್ನು ಬಳಸತೊಡಗಿದರು.

	ಈ ವಿಧಾನದಿಂದ ಸಸ್ಯಗಳನ್ನು ಬೆಳೆಸಲು ಉಪಯೋಗಿಸುವ ಉಪಕರಣಗಳು ಹಲವಾರು ಬಗೆಯವು. ಕೆಲವು ಉಪಕರಣಗಳು ಬೇಕರಿಗಳಲ್ಲಿ ಬ್ರೆಡ್ಡು, ಬಿಸ್ಕತ್ತು ಮುಂತಾದವನ್ನು ತಯಾರಿಸಲು ಬಳಸುವ ಟ್ರೇ ಅಥವಾ ತಟ್ಟೆಗಳಂತಿದ್ದು ಇವನ್ನು ಬಡುಗಳಲ್ಲಿ ಒಳಸರಿಸಿ ಇಡುವಂತೆ, ಇನ್ನು ಕೆಲವು ಬಗೆಯವು ಕಾಂಕ್ರೀಟು ಇಲ್ಲವೆ ಕಬ್ಬಿಣದಿಂದ ತಯಾರಿಸಿದ ತೆಟ್ಟೆ ತೊಟ್ಟಿಗಳಂತಿದ್ದು ಇವುಗಳ ಮೇಲೆ ಸಸ್ಯಗಳು ನಿಲ್ಲಲು ಅನುಕೂಲಿಸುವಂತೆ ತಂತಿಯ ಬಲೆ ಹಾಸಿರಬಹುದು. ಇಂಥ ತೊಟ್ಟಿಗಳ ತಳದಲ್ಲಿ ಪೈನಮರದ ಹತ್ತರಿಸಿಪ್ಪೆ, ಬತ್ತದಹೊಟ್ಟು, ಪೀಟ್ ಹಾವಸೆ ಇಲ್ಲವೆ ಜಲ್ಲಿಕಲ್ಲು, ಮರಳು ಮುಂತಾದ ಜಡವಸ್ತುಗಳನ್ನು ಹರಡಲಾಗುತ್ತದೆ. ಇದರಿಂದ ಗಿಡಗಳು ಭದ್ರವಾಗಿ ನಿಲ್ಲಲು ಆಸರೆ ದೊರೆಯುತ್ತದೆ. ಬಳಸುವ ತೊಟ್ಟಿ ಯಾವುದೇ ಬಗೆಯಾಗಿರಲಿ ಸಸ್ಯಬೆಳವಣಿಗೆಗೆ ಅವಶ್ಯವಾದ ವಾಯು, ಉಷ್ಣತೆ, ನೀರು ಹಾಗೂ ಖನಿಜ ಪೋಷಕಾಂಶಗಳನ್ನು ಪೂರೈಸಲು ಸೂಕ್ತವಾದ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ. ಬೆಳೆಸಬೇಕೆನ್ನುವ ಗಿಡಗಳ ಬೀಜಗಳನ್ನು ಮೇಲೆ ಹೇಳಿದ ತಟ್ಟೆಗಳೊಳಗೆ ಇಲ್ಲವೆ ತೊಟ್ಟಿಗಳಲ್ಲಿ ತೆಳುವಾಗಿ ಹರಡಿ ವ್ಯವಸ್ಥಿತ ಕೊಳವೆಗಳ ಮೂಲಕ ಸಸ್ಯಗಳ ಬೆಳವಣಿಗೆಗೆ ಅವಶ್ಯಕವಾದ ನೀರು; ಅಮೋನಿಯಮ್ ಸಲ್ಫೇಟ್, ಪೊಟ್ಯಾಸಿಯಮ್ ಸಲ್ಫೇಟ್, ಮೆಗ್ನೀಷಿಯಮ್ ಸಲ್ಫೇಟ್, ಕಬ್ಬಿಣದ ಸಲ್ಫೇಟ್ ಮುಂತಾದ ಲವಣಾಂಶಗಳನ್ನೊಳಗೊಂಡಿರುವ ದ್ರವರೂಪದ ಪೋಷಣಮಾಧ್ಯಮಗಳನ್ನು ಹಾಯಿಸಬೇಕು. ಅಲ್ಲದೆ ಬೆಳಕು, ಆಕ್ಸಿಜನ್ ಮತ್ತು ಉಷ್ಣತೆಯನ್ನು ಬೇಕಾದ ಹತೋಟಿಯಲ್ಲಿಟ್ಟಿರಬೇಕು.

	ಜಲಕೃಷಿಯಿಂದ ಅನೇಕ ಅನುಕೂಲತೆಗಳಿವೆ. ಹೊರಗಿನ ವಾತಾವರಣವೇನೇ ಇರಲಿ, ಶೀತಪ್ರದೇಶವಾಗಲಿ, ಬಂಜರುಭೂಮಿಯಾಗಲಿ, ಈ ವಿಧಾನದ ಸಹಾಯದಿಂದ ಬೇಕಾದ ಆಹಾರ ಸಸ್ಯಗಳನ್ನು ಮನೆಯಲ್ಲಿಯೇ ಬೆಳೆಸಿಕೊಳ್ಳಬಹುದು. ಭೂಮಿಯ ಮೇಲೆ ಮಾಡುವ ವ್ಯವಸಾಯದಲ್ಲಿ ಮಣ್ಣಿನ ಸಾರಾಂಶಗಳು ಜರಿದು ನಷ್ಟವಾಗುವ ಸಂಭಾವ್ಯತೆ ಉಂಟು. ಆದರೆ ಜಲಕೃಷಿಯಲ್ಲಿ ಈ ಪ್ರಮೇಯ ಇಲ್ಲ. ಅಲ್ಲದೆ ಇಲ್ಲಿ ಅಲ್ಪಪ್ರಮಾಣದ ಗೊಬ್ಬರ ಮಿಶ್ರಣವೇ ಸಾಕಾಗುತ್ತದೆ. ಅದೇ ರೀತಿಯಲ್ಲಿ ಈ ತಂತ್ರದಲ್ಲಿ ನೀರಿನ ಅವಶ್ಯಕತೆಯೂ ಕಡಿಮೆ ಏಕೆಂದರೆ ಭೂವ್ಯವಸಾಯದಲ್ಲಿಯಂತೆ ನೀರು ಆವಿಯಾಗಿ ಹೋಗುವ ಸಂಭವವಿರದು. ಜಲಕೃಷಿಯಲ್ಲಿ ಕೃತಕ ಬೆಳಕನ್ನು ಬಳಸುವುದರಿಂದ ಮೋಡಭರಿತ ವಾತಾವರಣದಲ್ಲಿ, ಸೂರ್ಯನ ಬೆಳಕೇ ಕಾಣದಂಥ ಪ್ರದೇಶಗಳಲ್ಲಿ ಗಿಡಗಳನ್ನು ಬೆಳೆಸಲು ಬಹಳ ಅನುಕೂಲ. ಗಿಡದ ಬೆಳವಣಿಗೆಯನ್ನು ಇಮ್ಮಡಿಗೊಳಿಸಲು ಬೇಕಾಗುವ ಕೆಂಪು ಮತ್ತು ನೀಲಿ ರಶ್ಮಿಗಳನ್ನು ಹೆಚ್ಚಾಗಿ ಸೂಸುವ ಕೃತಕ ಬಲ್ಬುಗಳನ್ನು ಬಳಸಲಾಗುತ್ತದೆ. ಜೊತೆಗೆ ವರ್ಷದಲ್ಲಿ ಸೂರ್ಯನ ಬೆಳಕು ಒಂದೇ ತರಹ ಇರುವುದಿಲ್ಲವಾದ್ದರಿಂದ ಭೂವ್ಯವಸಾಯದಲ್ಲಿ ಕೆಲವು ನಿರ್ದಿಷ್ಟ ಕಾಲದಲ್ಲಿ ಮಾತ್ರ ಬೆಳೆ ತೆಗೆಯಬಹುದು. ಆದರೆ ಜಲಕೃಷಿಯಲ್ಲಿ ಬೆಳಕಿನ ತೀಕ್ಷ್ಣತೆಯನ್ನು ಹತೋಟಿಯಲ್ಲಿಡುವುದರ ಮೂಲಕ ಬೇಕಾದ ಬೆಳೆಯನ್ನು ವರ್ಷದಲ್ಲಿ ಯಾವಾಗಲೂ ಪಡೆಯುವ ಸಾಧ್ಯತೆ ಇದೆ. ಈ ಕ್ರಮದಲ್ಲಿ ಕೆಲವು ಗಿಡಗಳ ಹೂ ಬಿಡುವ ಮತ್ತು ಅರಳುವ ಹೊತ್ತನ್ನು ಗೊತ್ತು ಪಡಿಸಬಹುದಲ್ಲದೆ ನಿಯಂತ್ರಿಸಬಹುದು. ಜಲಕೃಷಿಯ ಮತ್ತೊಂದು ಮುಖ್ಯ ಪ್ರಯೋಜನವೆಂದರೆ ಬೆಳೆಯನ್ನು ಕ್ರಿಮಿಕೀಟಾದಿಗಳಿಂದ ದೂರವಿಟ್ಟು ರೋಗಗಳ ಸೋಂಕಿಲ್ಲದಂತೆ ಸಂರಕ್ಷಿಸುವುದು. ಜಲಕೃಷಿಯ ವಿಧಾನದಿಂದ ದಿನಬಳಕೆಗೆ ಬೇಕಾಗುವಷ್ಟು ತರಕಾರಿ ಹಣ್ಣುಹಂಪಲುಗಳನ್ನು ಬೇಕೆನಿಸಿದಾಗ ಬೆಳೆಸಿ ಉಪಯೋಗಿಸಬಹುದು. ದಿವಸಕ್ಕೊಂದರಂತೆ ಒಂದೊಂದು ತೆಟ್ಟೆಗೆ ಬೀಜಗಳನ್ನು ಹರಡುತ್ತ ಬಂದರೆ ಒಂದು ಫಸಲು ಮುಗಿಯುತ್ತಿದ್ದಂತೆಯೆ ಮತ್ತೊಂದು ಸಿದ್ಧವಾಗಿರುವಂತೆ ಸರಿದೂಗಿಸಿಕೊಳ್ಳ್ಳಬಹುದು.

	ಜಲಕೃಷಿಗೆ ವ್ಯವಸ್ಥೆಗೊಳಿಸಿದ ಕೋಣೆಯಲ್ಲಿ ಹೂವಿನ ಗಿಡಗಳನ್ನೂ ಸಣ್ಣ ಸಣ್ಣ ಹಣ್ಣಿನ ಗಿಡಗಳನ್ನೂ ಟೊಮ್ಯಾಟೊ, ಕೊತ್ತಂಬರಿ, ಹಲವಾರು ಬಗೆಯ ಸೊಪ್ಪು, ಬೀಟ್‍ರೂಟ್, ಮೂಲಂಗಿ, ಗೆಣಸು, ಆಲೂಗೆಡ್ಡೆ, ಈರುಳ್ಳಿ, ಬೆಳ್ಳುಳ್ಳಿ, ಕುಂಬಳ ಇತ್ಯಾದಿ ತರಕಾರಿಗಳನ್ನೂ ಬತ್ತ, ಗೋದಿ, ನವಣೆ, ಓಟ್ಸ್, ಬಾರ್ಲಿಗಳನ್ನೂ ಬೆಳೆಸಬಹುದಾಗಿದೆ. ಅನಾನಸ್, ಟೊಮ್ಯಾಟೊ ಮುಂತಾದವನ್ನು ಈ ವಿಧಾನದಿಂದ ಬೆಳೆಸಿದಾಗ ಅವು ಹೆಚ್ಚು ರಸವತ್ತಾಗಿರುತ್ತವೆಂದು ಕಂಡುಬಂದಿದೆ. ಹೀಗೆ ಬೆಳೆದ ತರಕಾರಿ ಮತ್ತು ಹಣ್ಣುಗಳು ಭೂಮಿಯಲ್ಲಿ ಬೆಳೆದವುಗಳಿಗಿಂತ ಎರಡರಷ್ಟು ಹೆಚ್ಚಿನ ವಿಟಮಿನ್‍ಗಳನ್ನೂ ಲವಣಗಳನ್ನೂ ಪಡೆದಿರುತ್ತವೆ. ಈ ಕ್ರಮದಲ್ಲಿ ಬೆಳೆದ ಒಂದೊಂದು ಟೊಮ್ಯಾಟೊ ಗಿಡವು 30 ಪೌಂಡುಗಳಷ್ಟು ಹಣ್ಣು ಬಿಡುತ್ತದೆ. ಅಂದರೆ ಒಂದು ಎಕರೆಗೆ 300 ಟನ್ ಟೊಮ್ಯಾಟೊ ಸಿಗುತ್ತದೆ. ಜಲಕೃಷಿ ಕ್ರಮದಲ್ಲಿ ಬೆಳೆದ ಹುಲ್ಲು ಕೂಡ ಹೆಚ್ಚು ಪುಷ್ಟಿಕರವಾಗಿರುತ್ತದೆ ಎಂದು ಹೇಳಲಾಗಿದೆ.

ಜಲಕೃಷಿ ಭಾರತದಲ್ಲಿ 1944ರಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾಗಿತ್ತು. ಈಗ ಇದು ಪ್ರಪಂಚದ ಅನೇಕ ಭಾಗಗಳಲ್ಲಿ ಬಳಕೆಯಲ್ಲಿದ್ದು ಅಮೆರಿಕ, ಯೂರೋಪ್, ಆಫ್ರಿಕ, ಆಸ್ಟ್ರೇಲಿಯ, ಜಪಾನ್, ಇಸ್ರೇಲ್ ಮತ್ತು ಭಾರತಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಅಮೆರಿಕ ಒಂದರಲ್ಲೆ ಸುಮಾರು 5 ಲಕ್ಷ ಮನೆಗಳಲ್ಲಿ ಭೂವ್ಯವಸಾಯ ಮತ್ತಿತರ ಕಸುಬುಗಳ ಜೊತೆಗೆ ಜಲಕೃಷಿಯನ್ನೂ ಮಾಡಲಾಗುತ್ತಿದೆ. ಗಣಿಗಳಲ್ಲಿ ಕೆಲಸ ಮಾಡುವವರಿಗೆ, ಯೋಧರಿಗೆ ಮತ್ತಿತರ ಕಷ್ಟಜೀವಿಗಳಿಗೆ ಅಲ್ಲೇ ಹೊಸತಾಗಿ ಬೆಳೆ ಬೆಳೆದು ಆಹಾರ ಒದಗಿಸಲು ಜಲಕೃಷಿ ಬಹಳ ಸಹಕಾರಿಯಾಗಿದೆ.					(ವಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ